ಅಂಜುಮನ್ ಮೈದಾನದಲ್ಲಿ ಲೆಜೆಂಡ್ ಟೂರ್ನಮೆಂಟ್. ಫೈನಲ್ ಗೆದ್ದ ತಾಜ್ ಬಿ .ಗ್ರಾಂಡ್ ಟೀಮ್
ಇಂಡಿ: 45 ವರ್ಷ ಮೇಲ್ಪಟ್ಟ ಆಟಗಾರರ ಲೆಜೆಂಡ್ ಕ್ರಿಕೆಟ್ ಟೂರ್ನಮೆಂಟ್‌ಗೆ ಭರ್ಜರಿ ಸ್ಪಂದನೆ ಶಾಸಕ ಯಶವಂತರಾಯಗೌಡ ಪಾಟೀಲರಿಂದ ಆಟಗಾರರಿಗೆ ಗೌರವ ನಮನ.
ಇಂಡಿ ನಗರದ ಅಂಜುಮನ್ ಮೈದಾನದಲ್ಲಿ 45 ವರ್ಷ ಮೇಲ್ಪಟ್ಟ ಅನುಭವೀ ಆಟಗಾರರಿಗಾಗಿ ಆಯೋಜಿಸಲಾದ ಲೆಜೆಂಡ್ ಕ್ರಿಕೆಟ್ ಟೂರ್ನಮೆಂಟ್ ಕ್ರೀಡಾ ಇತಿಹಾಸದಲ್ಲಿ ಮರೆಯಲಾಗದ ಕ್ಷಣವಾಗಿ ಮೂಡಿಬಂದಿತು. ಇಂಡಿ ನಗರದ ಯುವ ಕ್ರಿಕೆಟ್ ಆಟಗಾರರಾದ ಅಬೂಬಕ್ಕರ್ ಶೇಖ್, ಸಲಾಹುದ್ದೀನ್ ಪಠಾಣ್, ಸಾದಿಕ್ ಬಾಗವಾನ್ ಹಾಗೂ ಮೊಹ್ಸಿನ್ ಪಠಾಣ್ ಅವರ ಮುಂದಾಳತ್ವದಲ್ಲಿ ಇಂಡಿ ತಾಲ್ಲೂಕಿನ 45 ವರ್ಷ ಮೇಲ್ಪಟ್ಟ ಆಟಗಾರರಿಗೆ ಈ ಟೂರ್ನಮೆಂಟ್ ಆಯೋಜಿಸಲಾಗಿತ್ತು.
ಟೂರ್ನಮೆಂಟ್‌ನಲ್ಲಿ ಭಾಗವಹಿಸಿದ ಹಿರಿಯ ಆಟಗಾರರು ತಮ್ಮ ಫಿಟ್‌ನೆಸ್, ಶಿಸ್ತು ಮತ್ತು ಕ್ರೀಡೆಯ ಮೇಲಿನ ಅಪಾರ ಆಸಕ್ತಿಯನ್ನು ಪ್ರದರ್ಶಿಸಿ ಕ್ರಿಕೆಟ್ ಅಭಿಮಾನಿಗಳನ್ನು ಮಂತ್ರಮುಗ್ಧಗೊಳಿಸಿದರು.
ಈ ಕಾರ್ಯಕ್ರಮದಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ಇಂದು ಮೈದಾನದಲ್ಲಿ ಆಟವಾಡುತ್ತಿರುವ ಈ ಲೆಜೆಂಡ್ ಆಟಗಾರರು ಮುಂದಿನ ಪೀಳಿಗೆಗೆ ಜೀವಂತ ಮಾದರಿಯಾಗಿದ್ದಾರೆ. ಕ್ರೀಡೆಗಳು ದೈಹಿಕ ಆರೋಗ್ಯಕ್ಕೆ ಮಾತ್ರವಲ್ಲ, ಯುವಕರಲ್ಲಿ ಶಿಸ್ತು, ಏಕತೆ ಮತ್ತು ಸಕಾರಾತ್ಮಕ ಚಿಂತನೆ ಬೆಳೆಸಲು ಸಹಕಾರಿ,” ಎಂದರು. ಭಾರತವು ಜಾಗತಿಕ ಮಟ್ಟದಲ್ಲಿ, ವಿಶೇಷವಾಗಿ ಕ್ರಿಕೆಟ್ ಕ್ಷೇತ್ರದಲ್ಲಿ ಅನೇಕ ಸಾಧನೆಗಳನ್ನು ಮಾಡಿದೆ. ಆ ಪರಂಪರೆಯನ್ನು ಮುಂದುವರಿಸುವ ಹೊಣೆಗಾರಿಕೆ ನಮ್ಮೆಲ್ಲರದ್ದಾಗಿದೆ ಎಂದು ಹೇಳಿದರು.
ಶಾಸಕ ಯಶವಂತರಾಯಗೌಡ ಪಾಟೀಲರು ತಮ್ಮ ಭಾಷಣದಲ್ಲಿ ಮುಸ್ಲಿಂ ಸಮುದಾಯದ ಶೈಕ್ಷಣಿಕ ಸ್ಥಿತಿಗತಿಯ ಕುರಿತು ಮಾತನಾಡಿ, ಇಂದಿನ ಕಾಲಘಟ್ಟದಲ್ಲಿ ಮುಸ್ಲಿಂ ಸಮಾಜ ಶಿಕ್ಷಣಕ್ಕೆ ವಿಶೇಷ ಆದ್ಯತೆ ನೀಡಬೇಕಾದ ಅಗತ್ಯವಿದೆ ಎಂದು ತಿಳಿಸಿದರು. ಇದುವರೆಗೆ ಮುಸ್ಲಿಂ ಸಮುದಾಯದ ಸಮಸ್ಯೆಗಳನ್ನು ಗಂಭೀರವಾಗಿ ಮುಂದಿಟ್ಟುಕೊಳ್ಳುವ ಬಲಿಷ್ಠ ನಾಯಕತ್ವ ರೂಪುಗೊಂಡಿಲ್ಲ ಎಂಬುದರ ಬಗ್ಗೆ ವಿಷಾದ ವ್ಯಕ್ತಪಡಿಸಿದರು.
ಮುಸ್ಲಿಂ ಸಮಾಜ ನನ್ನ ಮೇಲೆ ಅಪಾರ ಉಪಕಾರ ಮಾಡಿದೆ. ಅದಕ್ಕಾಗಿ ನಾನು ಹೃದಯಪೂರ್ವಕವಾಗಿ ಮನವಿ ಮಾಡುತ್ತೇನೆ—ನಿಮ್ಮ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸಲು ನೀವು ಸ್ವತಃ ಮುಂದಾಗಬೇಕು. ನಾನು ಸದಾ ನಿಮ್ಮೊಂದಿಗೆ ನಿಲ್ಲುತ್ತೇನೆ. ನಿಮ್ಮ ಮಕ್ಕಳ ಭವಿಷ್ಯ ನಿಮ್ಮ ಕೈಯಲ್ಲಿದೆ; ಅದನ್ನು ಉತ್ತಮಗೊಳಿಸುವುದು ನಿಮ್ಮ ಸಾಮೂಹಿಕ ಜವಾಬ್ದಾರಿ.
ಇದಲ್ಲದೆ, ಅಂಜುಮನ್ ಸಂಸ್ಥೆಗಳ ಸ್ಥಾಪನೆಯ ಹಿಂದೆ ಅನೇಕ ಹಿರಿಯರು ಹಾಗೂ ಸಮಾಜಸೇವಕರ ಮಹತ್ತರ ತ್ಯಾಗಗಳು ಅಡಗಿವೆ. ಅವರ ಕನಸುಗಳನ್ನು ಮುಂದುವರಿಸುವುದು ನಿಮ್ಮ ಕರ್ತವ್ಯ ಎಂದು ಹೇಳಿದರು. ಅಂಜುಮನ್ ಸಂಸ್ಥೆಯವರು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಇಲ್ಲಿ ತಾಂತ್ರಿಕ ಕೋರ್ಸ್‌ಗಳನ್ನು ಆರಂಭಿಸಿ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ಮನವಿ ಮಾಡಿದರು. ಮುಸ್ಲಿಂ ಸಮುದಾಯದ ನಾಯಕರು ಏಕತೆ ಹಾಗೂ ಸಹಕಾರದೊಂದಿಗೆ ಜನಪ್ರತಿನಿಧಿಗಳನ್ನು ಸಂಪರ್ಕಿಸಿ ಸಮುದಾಯದ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಪ್ರಗತಿಗೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಆಶಯವನ್ನು ವ್ಯಕ್ತಪಡಿಸಿದರು.
ಈ ಲೆಜೆಂಡ್ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ತಾಜ್ ಬಿ ಗ್ರ್ಯಾಂಡ್ ತಂಡ ಪ್ರಥಮ ಸ್ಥಾನ ಪಡೆದುಕೊಂಡರೆ, ಎ.ಆರ್.ಬಿ. ತಂಡ ದ್ವಿತೀಯ ಸ್ಥಾನ ಪಡೆದರು.
ಕಾರ್ಯಕ್ರಮದಲ್ಲಿ ಇಂಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂಗೊಂಡ, ಜಾವಿದ ಮೊಮಿನ್, ಗ್ಯಾರಂಟಿ ಯೋಜನೆ ಅಧ್ಯಕ್ಷ ಇಲಿಯಾಸ್ ಬೋರಮಣಿ, ಅಯೂಬ್ ಬಾಗವಾನ್, ಮುಖ್ತಾರ್ ಅರಬ್, ಮನಾ ಡಾಂಗೇ, ಅಬೂ ಗ್ಯಾಸ ಮುಲ್ಲಾ, ಮನಾ ಇಂಡಿಕರ್, ಉಮರ್ ಶೇಖ್, ಅಬೂತಾಲಿಬ್ ಹೊಸೂರು, ಇಕ್ಬಾಲ್ ಪಠಾಣ್, ಬಾಬಾ ನಾಗಠಾಣ್, ಅಫ್ಜಲ್ ಹವಾಲ್ದಾರ್, ಮಹಬೂಬ್ ಜಾಗೀರ್‌ದಾರ್, ಜಹಾಂಗೀರ್ ದೇಸಾಯಿ, ಶಾಹಿದ್ ಶೇಖ್, ಮುಜೀಬ್ ಅಫ್ಜಲ್‌ಪುರ, ಯಮನಾಜಿ ಸಲೋಂಕೆ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.



ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ